ಪದ್ಯ ೫೭: ಸಂಜಯನು ಯಾವ ವಿಷಯವನ್ನು ಸಂತಸದಿಂದ ಹೇಳಿದನು?

ಅದ್ದು ದುಮ್ಮಾನದಲಿ ಹೊಡೆಮಗು
ಳೆದ್ದುದೀ ಕುರುಸೇನೆ ತಡಿಯಲಿ
ಬಿದ್ದುದತಿಸಂತೋಷಸಾರಕ್ಷೀರಜಲಧಿಯಲಿ
ಗೆದ್ದನೈ ನಿನ್ನತನೊಸಗೆಯ
ಬಿದ್ದಿನರಲೈ ನಾವು ಪರರಿಗೆ
ಬಿದ್ದುದೊಂದು ವಿಘಾತಿಯೆಂದನು ಸಂಜಯನು ನಗುತ (ಕರ್ಣ ಪರ್ವ, ೨೪ ಸಂಧಿ, ೫೭ ಪದ್ಯ)

ತಾತ್ಪರ್ಯ:
ದುಃಖದ ಮಡುವಿನಲ್ಲಿ ಮುಳುಗಿದ್ದ ಕುರುಸೇನೆಯು ದಡಕ್ಕೆ ಬಂದಿತು, ಸಂತೋಷದ ಹಾಲಿನ ಕಡಲಲ್ಲಿ ವಿಹರಿಸಿತು, ನಿನ್ನ ಕರ್ಣನು ಗೆದ್ದ, ಆ ಶುಭ ಕಾರ್ಯದಲ್ಲಿ ನಾವೂ ಅತಿಥಿಗಳು. ಪಾಂಡವರಿಗೆ ಮಹತ್ತರವಾದ ಪೆಟ್ಟು ಬಿದ್ದಿತು ಎಂದು ಸಂಜಯನು ನಗುತ ವಿವರಿಸಿದನು.

ಅರ್ಥ:
ಅದ್ದು: ತೋಯ್ದು; ದುಮ್ಮಾನ: ದುಃಖ; ಹೊಡೆ: ಪೆಟ್ಟು; ಮಗುಳೆದ್ದು: ಮತ್ತೆ ಚೇತರಿಸಿಕೋ, ಎದ್ದೇಳು; ತಡಿ: ದಡ; ಅತಿ: ಬಹಳ; ಸಂತೋಷ: ಸಂತಸ; ಸಾರ: ರಸವತ್ತಾದ; ಕ್ಷೀರಜಲಧಿ; ಹಾಲಿನ ಸಮುದ್ರ; ಗೆದ್ದು: ವಿಜಯ; ಒಸಗೆ: ಶುಭ, ಮಂಗಳಕಾರ್ಯ, ಸಂದೇಶ; ಪರರು: ಬೇರೆ; ವಿಘಾತಿ: ಪೆಟ್ಟು, ಹೊಡೆತ; ನಗು: ಸಂತಸ;

ಪದವಿಂಗಡಣೆ:
ಅದ್ದು +ದುಮ್ಮಾನದಲಿ +ಹೊಡೆ+ಮಗುಳ್
ಎದ್ದುದ್+ಈ+ ಕುರುಸೇನೆ +ತಡಿಯಲಿ
ಬಿದ್ದುದ್+ಅತಿ+ಸಂತೋಷಸಾರ+ಕ್ಷೀರ+ಜಲಧಿಯಲಿ
ಗೆದ್ದನೈ+ ನಿನಾತನ್+ಒಸಗೆಯ
ಬಿದ್ದಿನರಲೈ +ನಾವು+ ಪರರಿಗೆ
ಬಿದ್ದುದೊಂದು +ವಿಘಾತಿಯೆಂದನು +ಸಂಜಯನು +ನಗುತ

ಅಚ್ಚರಿ:
(೧) ಕುರುಸೇನೆಯ ಸಂತಸವನ್ನು ಹೇಳುವ ಪರಿ – ಮಗುಳೆದ್ದುದೀ ಕುರುಸೇನೆ ತಡಿಯಲಿ
ಬಿದ್ದುದತಿಸಂತೋಷಸಾರಕ್ಷೀರಜಲಧಿಯಲಿ

ಪದ್ಯ ೫೬: ಹನುಮನು ಕರ್ಣನನ್ನು ಹೇಗೆ ಹೊಗಳಿದನು?

ಪೂತು ಮಝರೇ ಕರ್ಣ ವಿಶಿಖ
ವ್ರಾತವೊಂದಿನಿತಿಲ್ಲ ಲಂಕೆಯ
ಘಾತಕರ ಚಾಪಳವ ಕಂಡೆನು ಚಾಪತಂತ್ರದಲಿ
ಈತನತಿಶಯಬಾಣರಚನಾ
ಜಾತಿಯಿದು ಭೀಷ್ಮಾದಿಸುಭಟ
ವ್ರಾತಕೆಲ್ಲಿಯದೆಂದು ತಲೆದೂಗಿದನು ಹನುಮಂತ (ಕರ್ಣ ಪರ್ವ, ೨೪ ಸಂಧಿ, ೫೬ ಪದ್ಯ)

ತಾತ್ಪರ್ಯ:
ಹನುಮಂತನು ಕರ್ಣನ ಬಿಲ್ಲುಪ್ರಯೋಗದ ಪ್ರವೀಣತೆಯನ್ನು ಕಂಡು, ಭಲೇ ಕರ್ಣ, ನಿನ್ನ ಬಾಣಪ್ರಯೋಗಕ್ಕೆ ಸರಿಯಾದುದು ಇಲ್ಲವೇ ಇಲ್ಲ. ಇಂತಹ ಬಾಣ ಪ್ರಯೋಗವನ್ನು ಲಂಕೆಯ ರಾಕ್ಷಸರಲ್ಲಿ ನೋಡಿದ್ದೆ, ಇವನ ಬಾಣರಚನಾ ಕೌಶಲ್ಯವು ಭೀಷ್ಮಾದಿ ವೀರರಿಗೆ ಎಲ್ಲಿಂದ ಬರಬೇಕು ಎಂದು ಹನುಮನು ಕರ್ಣನನ್ನು ಹೊಗಳಿದನು.

ಅರ್ಥ:
ಪೂತು: ಭಲೇ; ಮಝ: ಭೇಷ್; ವಿಶಿಖ: ಬಾಣ, ಅಂಬು; ವ್ರಾತ: ಗುಂಪು; ಇನಿತು: ಇಷ್ಟು; ಘಾತಕ: ದುಷ್ಟ; ಚಾಪ: ಬಿಲ್ಲು; ಕಂಡು: ನೋಡು; ಚಾಪತಂತ್ರ: ಬಿಲ್ಲುವಿದ್ಯೆಯ ಪ್ರಯೋಗ; ಅತಿಶಯ: ಶ್ರೇಷ್ಠ; ಬಾಣ: ಶರ; ರಚನೆ: ನಿರ್ಮಾಣ, ಸೃಷ್ಟಿ; ಜಾತಿ: ವಂಶ; ಸುಭಟ: ಶ್ರೇಷ್ಠ ಸೈನಿಕ; ವ್ರಾತ: ಗುಂಪು; ತಲೆ: ಶಿರ; ತೂಗು: ತೂಗಾಡಿಸು; ಹನುಮಂತ: ಆಂಜನೇಯ;

ಪದವಿಂಗಡಣೆ:
ಪೂತು +ಮಝರೇ +ಕರ್ಣ +ವಿಶಿಖ
ವ್ರಾತ+ಒಂದಿನಿತಿಲ್ಲ+ ಲಂಕೆಯ
ಘಾತಕರ +ಚಾಪಳವ+ ಕಂಡೆನು +ಚಾಪ+ತಂತ್ರದಲಿ
ಈತನ್+ಅತಿಶಯ+ಬಾಣ+ರಚನಾ
ಜಾತಿಯಿದು +ಭೀಷ್ಮಾದಿ+ಸುಭಟ
ವ್ರಾತಕ್+ಎಲ್ಲಿಯದೆಂದು +ತಲೆದೂಗಿದನು +ಹನುಮಂತ

ಅಚ್ಚರಿ:
(೧) ಪೂತು, ಮಝರೇ – ಹೊಗಳುವ ನುಡಿ
(೨) ಕರ್ಣನನ್ನು ಹೋಲಿಸುವ ಪರಿ – ಲಂಕೆಯ ಘಾತಕರ ಚಾಪಳವ ಕಂಡೆನು ಚಾಪತಂತ್ರದಲಿ

ಪದ್ಯ ೫೫: ರಾಕ್ಷಸಗಣವು ಯಾರನ್ನು ಹೊಗಳಿತು?

ತಾರಕನ ಜಂಭನ ನಿಕುಂಭನ
ತಾರಕಾಕ್ಷನ ಕಾಲನೇಮಿಯ
ವೀರ ಮಹಿಷಾಸುರನ ಬಾಣಾಸುರನ ರಾವಣನ
ತೋರಹತ್ತರ ಬಾಹುಬಲವನು
ಸಾರಿಯಾ ಕರ್ಣಂಗೆ ಮಿಕ್ಕಿನ
ಸಾರಹೃದಯರು ನಿನಗೆ ಸರಿಯಿಲ್ಲೆಂದುದಸುರಗಣ (ಕರ್ಣ ಪರ್ವ, ೨೪ ಸಂಧಿ, ೫೫ ಪದ್ಯ)

ತಾತ್ಪರ್ಯ:
ತಾರಕ, ಜಂಭ, ನಿಕುಂಭ, ತಾರಕಾಕ್ಷ, ಕಾಲನೇಮಿ, ಮಹಿಷಾಸುರ, ಬಾಣಾಸುರ, ರಾವಣ ಮೊದಲಾದ ವೀರರ ಬಾಹುಬಲವು ಕರ್ಣನ ಬಾಹುಬಲಕ್ಕೆ ಅನುಸಾರಿ. ಉಳಿದವರಾರೂ ನಿನಗೆ ಸರಿಯಿಲ್ಲ ಎಂದು ರಾಕ್ಷಸಗಣವು ಕರ್ಣನನ್ನು ಹೊಗಳಿತು.

ಅರ್ಥ:
ವೀರ: ಶೂರ; ಅಸುರ: ರಾಕ್ಷಸ; ತೋರು: ಕಾಣಿಸು, ಪ್ರದರ್ಶಿಸು; ಬಾಹುಬಲ: ಪರಾಕ್ರಮಿ; ಸಾರಿ: ಸರಿಸಮಾನ; ಮಿಕ್ಕ: ಉಳಿದ; ಸಾರ: ಶೌರ್ಯ, ಪರಾಕ್ರಮ, ಶ್ರೇಷ್ಠ; ಹೃದಯ: ಎದೆ; ಗಣ: ಗುಂಪು;

ಪದವಿಂಗಡಣೆ:
ತಾರಕನ +ಜಂಭನ +ನಿಕುಂಭನ
ತಾರಕಾಕ್ಷನ+ ಕಾಲನೇಮಿಯ
ವೀರ +ಮಹಿಷಾಸುರನ +ಬಾಣಾಸುರನ +ರಾವಣನ
ತೋರಹತ್ತರ +ಬಾಹುಬಲವನು
ಸಾರಿ+ಆ+ ಕರ್ಣಂಗೆ +ಮಿಕ್ಕಿನ
ಸಾರ+ಹೃದಯರು +ನಿನಗೆ+ ಸರಿಯಿಲ್ಲೆಂದುದ್+ಅಸುರಗಣ

ಅಚ್ಚರಿ:
(೧) ಅಸುರರ ಹೋಲಿಕೆ – ತಾರಕ, ಜಂಭ, ನಿಕುಂಭ,,ತಾರಕಾಕ್ಷ, ಕಾಲನೇಮಿಯ, ಮಹಿಷಾಸುರ, ಬಾಣಾಸುರ, ರಾವಣ

ಪದ್ಯ ೫೪: ದೇವತೆಗಳು ಅರ್ಜುನನನ್ನು ಹೇಗೆ ಕೊಂಡಾಡಿದರು?

ಪರಶುರಾಮನ ಕಾರ್ತವೀರ್ಯನ
ವರ ದಿಳೀಪನ ದುಂದುಮಾರನ
ಭರತ ದಶರಥ ನಹುಷ ನಳ ರಾಘವನ ಲಕ್ಷ್ಮಣನ
ಸರಿಮಿಗಿಲು ಕಲಿಪಾರ್ಥನೀ ಮಿ
ಕ್ಕರಸುಗಳ ಪಾಡೇ ಕಿರೀಟಿಯ
ದೊರೆಯದಾವವನೆನುತ ಕೊಂಡಾಡಿತು ಸುರಸ್ತೋಮ (ಕರ್ಣ ಪರ್ವ, ೨೪ ಸಂಧಿ, ೫೪ ಪದ್ಯ)

ತಾತ್ಪರ್ಯ:
ಪರಶುರಾಮ, ಕಾರ್ತವೀರ್ಯ, ದಿಲೀಪ, ದುಂದುಮಾರ, ಭರತ, ದಶರಥ, ನಹುಷ, ನಳ, ರಾಮ, ಲಕ್ಷ್ಮಣರಿಗೆ ಅರ್ಜುನನು ಮೇಲಾಗಿರುವನು, ಅರ್ಜುನನಿಗೆ ಯಾರು ತಾನೆ ಸಮಾನರು ಎಂದು ದೇವತೆಗಳು ಕೊಂಡಾಡಿದರು.

ಅರ್ಥ:
ಸರಿಮಿಗಿಲು: ಒಬ್ಬ ವ್ಯಕ್ತಿಗಿಂತ ಮತ್ತೊಬ್ಬ ವ್ಯಕ್ತಿ ಮೇಲಾಗಿರುವುದು, ಅತಿಶಯ; ಕಲಿ: ಶೂರ; ಅರಸು: ರಾಜ; ಪಾಡು: ಸ್ಥಿತಿ, ಅವಸ್ಥೆ; ದೊರೆ: ಪಡೆ; ಕೊಂಡಾಡು: ಹೊಗಳು; ಸುರಸ್ತೋಮ: ದೇವತೆಗಳ ಗುಂಪು; ವರ: ಶ್ರೇಷ್ಠ;

ಪದವಿಂಗಡಣೆ:
ಪರಶುರಾಮನ +ಕಾರ್ತವೀರ್ಯನ
ವರ +ದಿಳೀಪನ +ದುಂದುಮಾರನ
ಭರತ+ ದಶರಥ+ ನಹುಷ +ನಳ +ರಾಘವನ+ ಲಕ್ಷ್ಮಣನ
ಸರಿಮಿಗಿಲು +ಕಲಿಪಾರ್ಥನೀ +ಮಿಕ್
ಅರಸುಗಳ +ಪಾಡೇ +ಕಿರೀಟಿಯ
ದೊರೆಯದ್+ಆವವ್+ಎನುತ +ಕೊಂಡಾಡಿತು+ ಸುರಸ್ತೋಮ

ಅಚ್ಚರಿ:
(೧) ದಿಗ್ಗಜರ ಹೆಸರು: ಪರಶುರಾಮ, ಕಾರ್ತವೀರ್ಯ, ದಿಳೀಪ, ದುಂದುಮಾರ,ಭರತ, ದಶರಥ, ನಹುಷ, ನಳ, ರಾಘವ, ಲಕ್ಷ್ಮಣ
(೨) ಕಿರೀಟಿ, ಅರ್ಜುನ – ಅರ್ಜುನನ ಹೆಸರುಗಳು

ಪದ್ಯ ೫೩: ಮೂರು ಲೋಕದಲ್ಲಿ ಏನು ಕಂಡವು?

ಝಳಪಿಸಿದುದೆರಡಂಕದಲಿ ನಿ
ಷ್ಕಲಿತ ತೇಜಃಪುಂಜವಿಬ್ಬರ
ಹಳಹಳಿಕೆ ಹಬ್ಬಿದುದು ಗಬ್ಬರಿಸಿದುದು ಗಗನದಲಿ
ಹಿಳುಕನೀದವೊ ಹಿಳುಕು ಮೊನೆಯಲ
ಗಲಗನುಗುಳ್ದವೊ ಕಣೆಗಳಲಿ ಕಣೆ
ತಳಿತವೋ ತ್ರೈಲೋಕ್ಯಬಾಣಾದ್ವೈತವಾಯ್ತೆಂದ (ಕರ್ಣ ಪರ್ವ, ೨೪ ಸಂಧಿ, ೫೩ ಪದ್ಯ)

ತಾತ್ಪರ್ಯ:
ಇಬ್ಬರ ಪ್ರಭೆಯೊ ಎರಡು ಪಕ್ಷಗಳಲ್ಲೂ ರಂಜಿಸಿತು. ಇಬ್ಬರ ರಭಸವೂ ಆಕಾಶದಲ್ಲಿ ಹಬ್ಬಿತು. ಬಾಣಗಳು ಬಾಣಗಳನ್ನೀದವೋ, ಬಾಣದ ಮೊನೆಗಳು ಬಾಣಗಳನ್ನುಗುಳಿದವೋ ಅಥವಾ ಬಾಣಗಳಲ್ಲಿ ಬಾಣಗಳು ಚಿಗುರಿದವೋ ತಿಳಿಯದು. ಮೂರು ಲೋಕಗಳಲ್ಲೂ ಬಾಣಗಳೇ ಕಂಡವು ಇನ್ನೇನೂ ಕಾಣಲಿಲ್ಲ.

ಅರ್ಥ:
ಝಳಪಿಸು: ಶೋಭಿಸು, ಪ್ರಕಾಶಿಸು; ಅಂಕ: ಯುದ್ಧ, ವಿಭಾಗ; ನಿಷ್ಕಲಿತ: ಜಾರಿಹೋಗುವ; ತೇಜ: ಕಾಂತಿ; ಪ್ರಕಾಶ; ಹಳಹಳಿಕೆ: ಕಾಂತಿ, ತೇಜಸ್ಸು; ಹಬ್ಬು: ಹರಡು; ಗಬ್ಬರಿಸು: ತೋಡು, ಬಗಿ, ಆವರಿಸು; ಗಗನ: ಆಗಸ; ಹಿಳುಕು: ಬಾಣದ ಹಿಂಭಾಗ, ಬಾಣದ ಗರಿ; ಮೊನೆ: ತುದಿ; ಅಲಗು: ಮೊನೆ, ಹರಿತವಾದ ಬಾಯಿ; ಉಗುಳು: ಹೊರಹಾಕು; ಕಣೆ: ಬಾಣ; ತಳಿತ: ಹೊಡೆ; ತ್ರೈಲೋಕ: ಮೂರು ಲೋಕ; ದ್ವೈತ: ಜೊತೆ;

ಪದವಿಂಗಡಣೆ:
ಝಳಪಿಸಿದುದ್+ಎರಡ್+ಅಂಕದಲಿ+ ನಿ
ಷ್ಕಲಿತ+ ತೇಜಃ+ಪುಂಜವ್+ಇಬ್ಬರ
ಹಳಹಳಿಕೆ+ ಹಬ್ಬಿದುದು +ಗಬ್ಬರಿಸಿದುದು +ಗಗನದಲಿ
ಹಿಳುಕನೀದವೊ+ ಹಿಳುಕು+ ಮೊನೆಯಲಗ್
ಅಲಗನ್+ಉಗುಳ್ದವೊ +ಕಣೆಗಳಲಿ +ಕಣೆ
ತಳಿತವೋ +ತ್ರೈಲೋಕ್ಯ+ಬಾಣಾದ್ವೈತವಾಯ್ತೆಂದ

ಅಚ್ಚರಿ:
(೧) ಜೋಡಿ ಪದಗಳು – ಹಳಹಳಿಕೆ ಹಬ್ಬಿದುದು; ಗಬ್ಬರಿಸಿದುದು ಗಗನದಲಿ; ತಳಿತವೋ ತ್ರೈಲೋಕ್ಯ
(೨) ಬಾಣಗಳು ಹಬ್ಬಿದವು ಎಂದು ಹೇಳಲು – ಬಾಣಾದ್ವೈತ ಪದದ ಬಳಕೆ

ಪದ್ಯ ೫೨: ಕರ್ಣನು ಏನು ಹೇಳಿ ಅರ್ಜುನನಿಗೆ ಬಾಣ ಬಿಟ್ಟನು?

ಭರತಭಾಷೆಯಲಾ ವಿಧಾವಂ
ತರು ವಿರಾಟನ ಮನೆಯಲಿದ್ದುದ
ನರಿಯೆವೇ ನಾವೆತ್ತ ಬಲ್ಲೆವು ನಿಮ್ಮ ವಿದ್ಯೆಗಳ
ಸರಸಮಾತಂತಿರಲಿ ಚಾಪ
ಸ್ಫುರಣದಭಿನಯದಂಗಹಾರದ
ಪರಿಯ ತೋರಾ ಎನುತ ತೆಗೆದೆಚ್ಚನು ಧನಂಜಯನ (ಕರ್ಣ ಪರ್ವ, ೨೪ ಸಂಧಿ, ೫೨ ಪದ್ಯ)

ತಾತ್ಪರ್ಯ:
ಎಲೈ ಅರ್ಜುನ ನೀನು ಭರತನಾಟ್ಯದಲ್ಲಿ ವಿದ್ವಾಂಸನಲ್ಲವೇ, ವಿರಾಟನ ಅರಮನೆಯಲ್ಲಿದುದು ನಮಗೆ ತಿಳಿದಿದೆ, ನಿಮ್ಮ ವಿದ್ಯೆಗಳ ಬಗ್ಗೆ ನಮಗೇನು ಗೊತ್ತು, ಸರಸದ ಮಾತುಗಳು ಹಾಗಿರಲಿ, ಬಿಲ್ಲಿನ ಕಂಪನದ ಅಭಿನಯವನ್ನು ತೋರಿಸು, ಎನ್ನುತ್ತಾ ಅರ್ಜುನನನ್ನು ಬಾಣಗಳಿಂದ ಘಾತಿಸಿದನು.

ಅರ್ಥ:
ಭರತಭಾಷೆ: ಭರತನಾಟ್ಯ; ಭಾಷೆ: ಮಾತು, ನುಡಿ; ವಿಧಾವಂತರು: ವಿದ್ವಾಂಸರು, ಪರಿಣಿತರು;
ಮನೆ: ಆಲಯ; ಅರಿ: ತಿಳಿ; ಬಲ್ಲೆ: ತಿಳಿ; ವಿದ್ಯೆ: ಜ್ಞಾನ; ಸರಸ: ಚೆಲುವು, ವಿನೋದ; ಮಾತು: ವಾಣಿ; ಚಾಪ: ಬಿಲ್ಲು; ಸ್ಫುರಣ: ಹೊಳೆಯುವುದು, ಮಿನುಗುವುದು; ಅಭಿನಯ: ನೃತ್ಯ; ಅಂಗಹಾರ: ನಾಟ್ಯದ ಅಭಿನಯ ಮುದ್ರೆ; ಪರಿ: ರೀತಿ; ತೊರು: ಪ್ರದರ್ಶಿಸು; ತೆಗೆ: ಹೊರತರು; ಎಚ್ಚು: ಬಾಣ ಬಿಡು;

ಪದವಿಂಗಡಣೆ:
ಭರತಭಾಷೆಯಲಾ +ವಿಧಾವಂ
ತರು +ವಿರಾಟನ +ಮನೆಯಲಿದ್ದುದನ್
ಅರಿಯೆವೇ +ನಾವೆತ್ತ+ ಬಲ್ಲೆವು+ ನಿಮ್ಮ +ವಿದ್ಯೆಗಳ
ಸರಸಮಾತ್+ಅಂತಿರಲಿ +ಚಾಪ
ಸ್ಫುರಣದ್+ಅಭಿನಯದ್+ಅಂಗಹಾರದ
ಪರಿಯ +ತೋರಾ +ಎನುತ+ ತೆಗೆದೆಚ್ಚನು+ ಧನಂಜಯನ

ಅಚ್ಚರಿ:
(೧) ಭರತನಾಟ್ಯ ಎಂದು ಹೇಳಲು – ಭರತಭಾಷೆ ಪದದ ಬಳಕೆ
(೨) ಹಂಗಿಸುವ ಪರಿ – ಭರತಭಾಷೆಯಲಾ ವಿಧಾವಂತರು; ನಾವೆತ್ತ ಬಲ್ಲೆವು ನಿಮ್ಮ ವಿದ್ಯೆಗಳ

ಪದ್ಯ ೫೧: ಅರ್ಜುನನು ಹೇಗೆ ಕರ್ಣನ ಎದುರು ನಿಂತನು?

ಅರಸ ಕೇಳೈ ಸಿಡಿಲಗರ್ಜನೆ
ಗುರವಣಿಪ ಕೇಸರಿಯವೊಲು ಕೃಪ
ಗುರುಸುತರ ಬಿಸುಟಿತ್ತ ಹಾಯ್ದನು ಹಗೆಯ ಸಮ್ಮುಖಕೆ
ತಿರುಪು ಸದರವು ನಿನಗೆ ಗತಿಕಾ
ಹುರ ಕಣಾವಳಿ ಕಂಠಗತ ಬಾ
ಹಿರನು ನೀನೆಲೆ ಕರ್ಣ ಫಡ ಹೋಗೆನುತ ತೆಗೆದೆಚ್ಚ (ಕರ್ಣ ಪರ್ವ, ೨೪ ಸಂಧಿ, ೫೧ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಯಾವ ರೀತಿ ಸಿಡಿಲ ಗರ್ಜನೆಗೆ ಪ್ರತಿಯಾಗಿ ಸಿಂಹವು ಕೂಗುವುದೋ ಆ ರೀತಿ ಅರ್ಜುನನು ಕೃಪ ಅಶ್ವತ್ಥಾಮರನ್ನು ಬಿಟ್ಟು ಕರ್ಣನ ಸಮ್ಮುಖಕ್ಕೆ ಬಂದನು. ನಾನು ತಿರುಗಿ ಬಂದುದು ಸದರವೆಂದು ತಿಳಿಯದಿರು, ಕೋಪದಿಂದ ಬರುವ ಬಾಣಗಳು ನಿನ್ನ ಕಂಠಕ್ಕೆರಗುತ್ತವೆ, ಛಿ ಕರ್ಣ ನೀನು ಹೊರಗಿನವನೆಂದು ಅರ್ಜುನನು ಬಾಣಗಳನ್ನು ಬಿಟ್ಟನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಸಿಡಿಲು: ಚಿಮ್ಮು, ಸಿಡಿ; ಗರ್ಜನೆ: ಆರ್ಭಟ; ಉರವಣಿ:ಆಧಿಕ್ಯ, ಅಬ್ಬರ; ಕೇಸರಿ: ಸಿಂಹ; ಬಿಸುಟು: ಬಿಟ್ಟು; ಹಾಯ್ದು: ಚಿಮ್ಮು; ಹಗೆ: ವೈರಿ; ಸಮ್ಮುಖ: ಎದುರು; ತಿರುಪು: ಸುತ್ತುವುದು, ತಿರುಗಾಟ; ಸದರ: ಸಲಿಗೆ, ಸಸಾರ; ಗತಿ: ಸ್ಥಿತಿ; ಕಾಹುರ: ಆವೇಶ, ಸೊಕ್ಕು, ಕೋಪ; ಕಣೆ: ಬಾಣ; ಆವಳಿ: ಗುಂಪು, ಸಾಲು; ಕಂಠ: ಕೊರಳು; ಬಾಹಿರ: ಹೊರಗಿನವ; ಫಡ; ತಿರಸ್ಕಾರದ ಮಾತು; ಹೋಗು: ತೊಲಗು; ತೆಗೆ: ಹೊರಗೆ ತರು; ಎಚ್ಚ: ಬಾಣಬಿಡು;

ಪದವಿಂಗಡಣೆ:
ಅರಸ +ಕೇಳೈ +ಸಿಡಿಲ+ಗರ್ಜನೆಗ್
ಉರವಣಿಪ +ಕೇಸರಿಯವೊಲು +ಕೃಪ
ಗುರುಸುತರ+ ಬಿಸುಟ್+ಇತ್ತ +ಹಾಯ್ದನು +ಹಗೆಯ +ಸಮ್ಮುಖಕೆ
ತಿರುಪು +ಸದರವು+ ನಿನಗೆ+ ಗತಿ+ಕಾ
ಹುರ+ ಕಣಾವಳಿ+ ಕಂಠಗತ+ ಬಾ
ಹಿರನು +ನೀನ್+ಎಲೆ +ಕರ್ಣ +ಫಡ+ ಹೋಗೆನುತ +ತೆಗೆದೆಚ್ಚ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕಾಹುರ ಕಣಾವಳಿ ಕಂಠಗತ
(೨) ಉಪಮಾನದ ಪ್ರಯೋಗ – ಸಿಡಿಲಗರ್ಜನೆಗುರವಣಿಪ ಕೇಸರಿಯವೊಲು

ಪದ್ಯ ೫೦: ಕರ್ಣನು ಅರ್ಜುನನನ್ನು ಯುದ್ಧಕ್ಕೆ ಹೇಗೆ ಆಹ್ವಾನಿಸಿದ?

ಫಡಫಡೆಲವೋ ಪಾರ್ಥ ಜೂಜಿಂ
ಗೊಡಬಡಿಕೆ ನಿಮಗೆಮಗೆ ಹಾರುವ
ರೊಡನೆ ಹೆಕ್ಕಳವೇಕೆ ಹೋಗದಿರಿತ್ತಲಿದಿರಾಗು
ಹಿಡಿದ ಮುಷ್ಟಿಗೆ ಸರ್ವ ರವಣವ
ಕೊಡಹಿ ನಿನ್ನೆದೆವೆರಳಕೊಳ್ಳದೆ
ಬಿಡುವೆನೇ ಬಾ ಎನುತ ಕರೆದನು ಕರ್ಣನರ್ಜುನನ (ಕರ್ಣ ಪರ್ವ, ೨೪ ಸಂಧಿ, ೫೦ ಪದ್ಯ)

ತಾತ್ಪರ್ಯ:
ಅರ್ಜುನನು ಕೃಪ ಅಶ್ವತ್ಥಾಮರನ್ನು ಎದುರಿಸಲು ಹೋಗುತ್ತಿದ್ದುದನ್ನು ಕಂಡ ಕರ್ಣನು, ಛಿ, ಎಲವೋ ಅರ್ಜುನ ಜೂಜಿನ ಒಡಂಬಡಿಕೆ ಇರುವುದು ನಮಗೆ ಮತ್ತು ನಿಮಗೆ, ಆ ಬ್ರಾಹ್ಮಣರ ಮೇಲೇಕೆ ಜೋರು, ಅತ್ತ ಹೋಗದೆ ನನ್ನ ಎದುರು ಬಾ, ಬಾಣದ ಹಿಡಿತದ ಮೇಲೆ ಎಲ್ಲಾ ನಂಬಿಕೆಯಿಟ್ಟು ನಿನ್ನೆದೆಯನ್ನು ಸೀಳದೆ ಬಿಡುವೆನೆ ನಾನು ಬಾ ಎಂದು ಕರ್ಣನು ಅರ್ಜುನನನ್ನು ಯುದ್ಧಕ್ಕೆ ಕರೆದನು.

ಅರ್ಥ:
ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಜೂಜು: ಏನಾದರು ಒತ್ತೆ ಇಟ್ಟು ಆಡುವುದು; ಒಡಬಡಿಕೆ: ಒಪ್ಪಿಗೆ; ಹಾರುವ: ಬ್ರಹ್ಮಣ; ಹೆಕ್ಕಳ:ಗರ್ವ, ಜಂಭ; ಹೋಗು: ತೊಲಗು; ಇದಿರಾಗು: ಎದುರು ಬಾ; ಹಿಡಿ: ಮುಷ್ಟಿ, ಬಂಧನ; ಮುಷ್ಟಿ: ಅಂಗೈ; ಸರ್ವ: ಎಲ್ಲಾ; ರವಣ: ಚಂಚಲವಾದ, ಅಸ್ಥಿರವಾದ; ಕೊಡಹಿ: ಸೀಳು; ಎದೆ: ವಕ್ಷಸ್ಥಳ; ಎರಲ್: ಗಾಳಿ; ಕೊಳ್ಳದೆ: ಪಡೆಯದೆ; ಬಿಡು: ತೊರೆ; ಕರೆ: ಬರೆಮಾಡು;

ಪದವಿಂಗಡಣೆ:
ಫಡಫಡ್+ಎಲವೋ +ಪಾರ್ಥ +ಜೂಜಿಂಗ್
ಒಡಬಡಿಕೆ +ನಿಮಗ್+ಎಮಗೆ +ಹಾರುವರ್
ಒಡನೆ+ ಹೆಕ್ಕಳವೇಕೆ +ಹೋಗದಿರ್+ಇತ್ತಲ್+ಇದಿರಾಗು
ಹಿಡಿದ +ಮುಷ್ಟಿಗೆ +ಸರ್ವ +ರವಣವ
ಕೊಡಹಿ +ನಿನ್ನೆದೆ+ವೆರಳ+ಕೊಳ್ಳದೆ
ಬಿಡುವೆನೇ+ ಬಾ +ಎನುತ +ಕರೆದನು +ಕರ್ಣನ್+ಅರ್ಜುನನ

ಅಚ್ಚರಿ:
(೧) ಕರ್ಣನ ಶೂರತ್ವದ ನುಡಿ: ಹಿಡಿದ ಮುಷ್ಟಿಗೆ ಸರ್ವ ರವಣವ ಕೊಡಹಿ ನಿನ್ನೆದೆವೆರಳಕೊಳ್ಳದೆ ಬಿಡುವೆನೇ ಬಾ ಎನುತ ಕರೆದನು ಕರ್ಣನರ್ಜುನನ

ಪದ್ಯ ೪೯: ಅರ್ಜುನನು ಯುದ್ಧಕ್ಕೆ ಹೇಗೆ ತಯಾರಿ ಮಾಡಿಕೊಂಡನು?

ಬೋಳವಿಸಿದನು ಶಲ್ಯನನು ಮಿಗೆ
ಸೂಳವಿಸಿದನು ಭುಜವನುಬ್ಬಿ ನೊ
ಳಾಳವಿಸಿದನು ಚಾಪಗಾನಸ್ವಾನಕವನರಿದು
ಮೇಳವಿಸಿ ನಿಜರಥವ ಕೆಲದಲಿ
ಜೋಳವಿಸಿ ಹೊದೆಯಂಬನಹಿತನ
ಪಾಳಿಸುವಡಂಬಿದೆಯೆನುತ ತೂಗಿದನು ಮಾರ್ಗಣೆಯ (ಕರ್ಣ ಪರ್ವ, ೨೪ ಸಂಧಿ, ೪೯ ಪದ್ಯ)

ತಾತ್ಪರ್ಯ:
ಕರ್ಣನು ತನ್ನ ಸಾರಥಿಯಾದ ಶಲ್ಯನನ್ನು ಸಮಾಧಾನ ಪಡಿಸಿದನು. ತನ್ನ ತೋಳನ್ನು ತಟ್ಟಿ, ಬಿಲ್ಲಿನ ಹೆದೆಯನ್ನು ಜೇವಡೆದು ಪರೀಕ್ಷಿಸಿ, ರಥವನ್ನು ಹೊಂದಿಸಿ, ಬಾಣಗಳ ಹೊರೆಯನ್ನು ಜೋಡಿಸಿಕೊಂಡು, ಶತ್ರುವನ್ನು ಸೀಳಿಹಾಕಲು ಬಾಣಗಳಿವೆ ಎಂದು ಅರಿತು ಬಾಣಗಳನ್ನು ಬಿಡಲು ಸಿದ್ದನಾದನು.

ಅರ್ಥ:
ಬೋಳೈಸು: ಸಮಾಧಾನಪಡಿಸು; ಮಿಗೆ: ಮತ್ತು; ಸೂಳವಿಸು: ಧ್ವನಿಮಾಡು, ಹೊಡೆ; ಭುಜ: ಬಾಹು; ಉಬ್ಬು: ಹೆಚ್ಚಾಗು; ಆಳ: ಅಂತರಾಳ, ಗಾಢತೆ; ಆಲೈಸು: ಮನಸ್ಸಿಟ್ಟು ಕೇಳು; ಚಾಪ: ಬಿಲ್ಲು; ಗಾನ: ಸ್ವರ, ಸದ್ದು; ಸ್ವಾನ: ಶಬ್ದ, ಧ್ವನಿ; ಅರಿ: ತಿಳಿ; ಮೇಳ: ಗುಂಪು; ನಿಜ: ತನ್ನ, ದಿಟ; ರಥ: ಬಂಡಿ; ಕೆಲ: ಕೊಂಚ, ಸ್ವಲ್ಪ; ಜೋಳವಿಸು: ಜೋಡಿಸು; ಹೊದೆ: ಬಾಣಗಳನ್ನಿಡುವ ಕೋಶ, ಬತ್ತಳಿಕೆ; ಅಂಬು: ಬಾಣ; ಅಹಿತ: ವೈರಿ, ಹಗೆ; ಪಾಳಿ: ಸರದಿ, ಶ್ರೇಣಿ; ತೂಗು: ಅಲ್ಲಾಡಿಸು, ಇಳಿಬೀಡು; ಮಾರ್ಗಣೆ: ಪ್ರತಿಯಾಗಿ ಬಿಡುವ ಬಾಣ, ಎದುರು ಬಾಣ;

ಪದವಿಂಗಡಣೆ:
ಬೋಳವಿಸಿದನು+ ಶಲ್ಯನನು+ ಮಿಗೆ
ಸೂಳವಿಸಿದನು +ಭುಜವನ್+ಉಬ್ಬಿನೊಳ್
ಆಳವಿಸಿದನು +ಚಾಪಗಾನ+ಸ್ವಾನಕವನ್+ಅರಿದು
ಮೇಳವಿಸಿ+ ನಿಜರಥವ+ ಕೆಲದಲಿ
ಜೋಳವಿಸಿ+ ಹೊದೆ+ಅಂಬನ್+ಅಹಿತನ
ಪಾಳಿಸುವಡ್+ಅಂಬಿದೆ+ಎನುತ +ತೂಗಿದನು +ಮಾರ್ಗಣೆಯ

ಅಚ್ಚರಿ:
(೧) ಬಿಲ್ಲಿನ ಶಬ್ದವನ್ನು ಕೇಳಿ ಎಂದು ಹೇಳಲು – ಚಾಪಗಾನ ಸ್ವಾನಕವನರಿದು
(೨) ಪ್ರಾಸ ಪದಗಳು – ಬೋಳವಿಸಿ, ಸೂಳವಿಸಿ, ಆಳವಿಸಿ, ಮೇಳವಿಸಿ, ಜೋಳವಿಸಿ

ಪದ್ಯ ೪೮: ಕರ್ಣನು ಹೇಗೆ ಯುದ್ಧಕ್ಕೆ ಮರುಳಿದನು?

ನೋಡಿದನು ಕೆಲಬಲನನುಗಿದೀ
ಡಾಡಿದನು ನಟ್ಟಂಬುಗಳ ಹರಿ
ಜೋಡಬಿಟ್ಟನು ತೊಳೆದನಂಗೋಪಾಂಗ ಶೋಣಿತವ
ಕೂಡೆ ಕಸ್ತುರಿಗಂಧದಲಿ ಮುಳು
ಗಾಡಿ ದಿವ್ಯದುಕೂಲದಲಿ ಮೈ
ಗೂಡಿ ಮೆರೆದನು ಕರ್ಣನನುಪಮ ತೀವ್ರತೇಜದಲಿ (ಕರ್ಣ ಪರ್ವ, ೨೪ ಸಂಧಿ, ೪೮ ಪದ್ಯ)

ತಾತ್ಪರ್ಯ:
ಕರ್ಣನು ತನ್ನ ಮೂರ್ಛೆಯಿಂದ ಎಚ್ಚೆತ್ತು, ಅಕ್ಕಪಕ್ಕದಲ್ಲಿ ತನ್ನ ಸೈನ್ಯವನ್ನು ನೋಡಿ, ತನ್ನ ಮೈಗೆ ನೆಟ್ಟಿದ ಬಾಣಗಳನ್ನು ಕಿತ್ತು, ಹರಿದ ಕವಚವನ್ನು ತೆಗೆದುಕಾಕಿ, ಅಂಗೋಪಾಂಗಗಳಿಗೆ ಅಂಟಿದ್ದ ರಕ್ತವನ್ನು ತೊಳೆದು, ಕಸ್ತೂರಿ ಗಂಧವನ್ನು ಲೇಪಿಸಿಕೊಂಡು, ಹೊಸ ಬಟ್ಟೆಯನ್ನುಟ್ಟು ತೇಜಸ್ಸಿನಿಂದ ಕರ್ಣನು ಹೊಳೆದನು.

ಅರ್ಥ:
ನೋಡು: ವೀಕ್ಷಿಸು; ಕೆಲ: ಸ್ವಲ್ಪ; ಬಲ: ಸೈನ್ಯ; ಉಗಿದು: ಹೊರಹಾಕು; ಈಡಾಡು: ಕಿತ್ತು, ಒಗೆ, ಚೆಲ್ಲು; ನಟ್ಟ: ಚುಚ್ಚಿದ; ಅಂಬು: ಬಾಣ; ಹರಿ: ಸೀಳಿದ; ಜೋಡು: ಕವಚ; ಬಿಟ್ಟನು: ತೊರೆ; ತೊಳೆ: ಸ್ವಚ್ಛಗೊಳಿಸು; ಅಂಗೋಪಾಂಗ: ಅಂಗಗಳು; ಶೋಣಿತ: ರಕ್ತ; ಕೂಡು: ಸೇರು ; ಕಸ್ತುರಿ: ಸುಗಂಧ ದ್ರವ್ಯ; ಗಂಧ: ಚಂದನ; ಮುಳುಗು: ತೋಯು; ದಿವ್ಯ: ಶ್ರೇಷ್ಠ; ದುಕೂಲ: ಬಟ್ಟೆ; ಮೈಗೂಡಿ: ತೊಟ್ಟು; ಮೆರೆ: ಹೊಳೆ, ಅನುಪಮ: ಹೋಲಿಕೆಗೆ ಮೀರಿದ; ತೀವ್ರ: ಹೆಚ್ಚಾದ, ಅಧಿಕ; ತೇಜ: ಕಾಂತಿ;

ಪದವಿಂಗಡಣೆ:
ನೋಡಿದನು+ ಕೆಲಬಲನನ್+ಉಗಿದ್
ಈಡಾಡಿದನು +ನಟ್ಟ್+ಅಂಬುಗಳ+ ಹರಿ
ಜೋಡ+ಬಿಟ್ಟನು +ತೊಳೆದನ್+ಅಂಗೋಪಾಂಗ +ಶೋಣಿತವ
ಕೂಡೆ +ಕಸ್ತುರಿ+ಗಂಧದಲಿ+ ಮುಳು
ಗಾಡಿ +ದಿವ್ಯ+ದುಕೂಲದಲಿ +ಮೈ
ಗೂಡಿ +ಮೆರೆದನು +ಕರ್ಣನನ್+ಅನುಪಮ +ತೀವ್ರ+ತೇಜದಲಿ

ಅಚ್ಚರಿ:
(೧) ನೋಡಿ, ಈಡಾಡಿ, ಮೈಗೂಡಿ, ಮುಳುಗಾಡಿ – ಪ್ರಾಸ ಪದಗಳು